ತಾರಾಪೋರ್‍ವಾಲ, ಐ ಜೆ ಎಸ್
1884-1956.  ಭಾರತದ ಪ್ರಸಿದ್ಧ ಭಾಷಾ ಶಾಸ್ತ್ರಜ್ಞರಲ್ಲಿ ಒಬ್ಬರು,  ಇವರ ಪೂರ್ಣ ಹೆಸರು ಇರಾಕ್ ಜಹಾಂಗೀರ್ ಸೊರಾಬ್ಜಿ ತಾರಾಪೋರ್‍ವಾಲ. ಹೈದರಾಬಾದಿನಲ್ಲಿ ಹುಟ್ಟಿದ  ಇವರು ಆರಂಭದ ಶಿಕ್ಷಣವನ್ನು ಮುಂಬಯಿಯಲ್ಲಿ ಮುಗಿಸಿಕೊಂಡು 1904ರಲ್ಲಿ ಉಚ್ಚ ಶಿಕ್ಷಣಕ್ಕಾಗಿ ಇಂಗ್ಲೆಂಡಿಗೆ ತೆರಳಿದರು.  1909ರಲ್ಲಿ ಬ್ಯಾರಿಸ್ಟರ್ ಆದರು.  ಸ್ವದೇಶಕ್ಕೆ ಮರಳುವ ಮುನ್ನ ಫ್ರಾನ್ಸ್ ಜರ್ಮನಿಗಳಿಗೆ ಹೋಗಿ ಫ್ರೆಂಚ್ ಜರ್ಮನ್ ಭಾಷೆಗಳನ್ನು ಕಲಿತರು.

ಸ್ವದೇಶಕ್ಕೆ ಬಂದ ಮೇಲೆ ವಾರಾಣಸಿಯ ಸೆಂಟ್ರಲ್ ಹಿಂದೂ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನೇಮಕಗೊಂಡರು.  1911 ರಲ್ಲಿ ಭಾರತ ಸರ್ಕಾರ ಸಂಸ್ಕøತದ ವೈಜ್ಞಾನಿಕ ಅಭ್ಯಾಸಕ್ಕೋಸ್ಕರ ಇವರಿಗೆ ವಿದ್ಯಾರ್ಥಿವೇತನ ನೀಡಿತು.  ಇದರ ಸಹಾಯದಿಂದ ಕೇಂಬ್ರಿಜ್ ವಿಶ್ವವಿದ್ಯಾಲಯವನ್ನು ಸೇರಿ ಬಿ.ಎ. ಪದವಿ ಗಳಿಸಿದರು.  ಅಲ್ಲಿ ಸಂಸ್ಕøತದ ಜೊತೆ ತುಲನಾತ್ಮಕ ಭಾಷಾಶಾಸ್ತ್ರ ಹಾಗೂ ಅರಬ್ಬೀ ಮತ್ತು ಪಾರ್ಸಿ ಭಾಷೆಗಳನ್ನು ಅಭ್ಯಸಿಸಿದರು.  1913ರಲ್ಲಿ ವಟ್ರ್ಸ್ ಬರ್ಗ್ ವಿಶ್ವವಿದ್ಯಾಲಯ ಸೇರಿ ಅವೆಸ್ತ, ಸಂಸ್ಕøತ ಹಾಗೂ ಶಿಕ್ಷಣ ಶಾಸ್ತ್ರಗಳನ್ನು  ಅಭ್ಯಸಿಸಿದರು.  ಅದೇ ಕಾಲದಲ್ಲಿ ಸಮ್ ನೋಟ್ಸ್ ಆನ್ ದಿ ಅಧ್ಯಕ್ಷ ಪ್ರಚಾರ  ಎಂಬ ಮಹಾಪ್ರಬಂಧವನ್ನು ಬರೆದು ಪಿ.ಎಚ್.ಡಿ. ಪದವಿಯನ್ನು ಪಡೆದರು.

ಭಾರತಕ್ಕೆ ಬಂದ ಅನಂತರ ವಾರಾಣಸಿಯ ಸೆಂಟ್ರಲ್ ಹಿಂದೂ ಕಾಲೇಜಿಯಟ್ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ನೇಮಕಗೊಂಡರು.  1917ರಲ್ಲಿ ಕಲ್ಕತ್ತ ವಿಶ್ವವಿದ್ಯಾಲಯದಲ್ಲಿ ತುಲನಾತ್ಮಕ ಭಾಷಾಶಾಸ್ತ್ರ ಪ್ರಾಧ್ಯಾಪಕರಾದರು.  ಆ ಸಮಯದಲ್ಲಿ ಸಂಸ್ಕøತ, ಪಾರ್ಸಿ, ಗುಜರಾತಿ ಮತ್ತು ಜರ್ಮನ್ ಭಾಷೆಗಳ ಅಧ್ಯಯನ ಮಾಡಿದರು.  ಅವೆಸ್ತ ಭಾಷೆಯನ್ನು ಕಲ್ಕತ್ತ ವಿಶ್ವವಿದ್ಯಾಲಯದಲ್ಲಿ ಬೋಧನ ವಿಷಯವನ್ನಾಗಿ ಸೇರಿಸಿದರು. ಇವರು 1927ರಿಂದ 1929ರ ವರೆಗೆ ಇರಾನಿಯನ್ ಅಧ್ಯಯನಗಳ ಬಗ್ಗೆ ವಿಶ್ವಭಾರತಿಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಹಲವಾರು ಭಾಷಣಗಳನ್ನು ಕೊಟ್ಟರು.  1930ರಲ್ಲಿ ಮುಂಬಯಿಯ ಎಮ್. ಎಫ್.ಸಿ. ಅಥರ್ವನ್ ಸಂಸ್ಥೆಯ ಪ್ರಿನ್ಸಿಪಾಲರಾಗಿ ನೇಮಕಗೊಂಡು 1940ರ ವರೆಗೂ ಅಲ್ಲಿದ್ದು ನಿವೃತ್ತರಾದರು. ಅನಂತರ ಪುಣೆಯ ಡೆಕ್ಕನ್ ಕಾಲೇಜಿನ ನಿರ್ದೇಶಕರಾಗಿ  ನೇಮಕಗೊಂಡು ಅಲ್ಲಿ 1942ರ ಅಕ್ಟೋಬರ್ 31ರ ತನಕ ದುಡಿದರು.  1955ರಲ್ಲಿ ಸಂಸ್ಕøತ ಮತ್ತು ಪ್ರಾಚೀನ ಇತಿಹಾಸದ ಪ್ರಾಧ್ಯಾಪಕರಾಗಿ ಇರಾನಿನ ಟೆಹ್ರಾನ್ ವಿಶ್ವವಿದ್ಯಾಲಯವನ್ನು ಸೇರಿದರು.  ಆದರೆ ಅನಾರೋಗ್ಯದಿಂದಾಗಿ ಒಂದೇ ತಿಂಗಳೊಳಗೆ ಸ್ವದೇಶಕ್ಕೆ ಹಿಂತಿರುಗಿದರು. 

ಇವರಿಗೆ ಭಾರತೀಯ ಐರೋಪ್ಯ ಭಾಷೆಗಳಲ್ಲದೆ ಹಲವಾರು ಪುರಾತನ ಭಾಷೆಗಳಲ್ಲಿ ಪಾಂಡಿತ್ಯವಿತ್ತು.  ಇವರು ಇಂಡಿಯನ್ ಲಿಂಗ್ವಿಸ್ಟಿಕ್ ಸೊಸೈಟಿಯ ಸ್ಥಾಪಕ ಸದಸ್ಯರಾಗಿದ್ದರಲ್ಲದೆ (1929) ಹಲವಾರು ಬಾರಿ ಅದರ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು.

ಭಾಷಾಶಾಸ್ತ್ರಕ್ಕೆ ಇವರ ಕೊಡುಗೆ ಅಮೂಲ್ಯವಾದುದು.  ತಮ್ಮ ಹಲವಾರು ಪ್ರಾರಂಭೋತ್ಸವ ಹಾಗೂ ಇತರ ಅಧ್ಯಕ್ಷೀಯ ಭಾಷಣಗಳಲ್ಲಿ ಇಂಡೋ ಯೂರೋಪಿಯನ್, ಇರಾನಿಯನ್ ಭಾಷೆಗಳ ಬಗ್ಗೆ ಘನವಾದ ವಿಚಾರಗಳನ್ನು ಮಂಡಿಸಿದರಲ್ಲದೆ ಭಾರತದಲ್ಲಿ ಭಾಷಾಶಾಸ್ತ್ರದ ಅಧ್ಯಯನಕ್ಕೆ ಒಂದು ಸ್ವರೂಪವನ್ನು ಕೊಟ್ಟರು.

ಸೆಲೆಕ್ಷನ್ಸ ಫ್ರಂ ಅವೆಸ್ತ ಅಂಡ್ ಓಲ್ಡ್ ಪರ್ಷಿಯನ್ (1922) ; ಎಲಿಮೆಂಟ್ಸ್ ಆಫ್ ದಿ ಸೈನ್ಸ್ ಆಫ್ ಲ್ಯಾಂಗ್ವೇಜ್ (1951 ದ್ವಿತೀಯ ಮುದ್ರಣ) ; ಹಿಸ್ಟರಿ ಆಫ್ ದಿ ಪಾರ್ಸಿಸ್ ಇನ್ ಇಂಡಿಯ ; ದಿ ಫ್ಯೂಚರ್ ಆಫ್ ಲಿಂಗ್ವಿಸ್ಟಿಕ್ ಸ್ಟಡೀಸ್ ಇನ್ ಇಂಡಿಯ ; ಸಮ್ ಆ್ಯಸ್ಪೆಕ್ಟ್ಸ್ ಆಫ್ ಇರಾನಿಯನ್ ಸ್ಟಡೀಸ್ ಇನ್ ಇಂಡಿಯ - ಇವು ಇವರ ಭಾಷಾಶಾಸ್ತ್ರ ಗ್ರಂಥಗಳಲ್ಲಿ ಕೆಲವು.
(ಡಬ್ಯ್ಲೂ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ